ದಕ್ಷಿಣೇಶ್ವರ -
ಶ್ರೀರಾಮಕೃಷ್ಣ ಪರಮಹಂಸರ ಲೀಲಾಸ್ಥಾನಗಳಲ್ಲಿ ಒಂದಾದ ಈ ಕ್ಷೇತ್ರ ಕಲ್ಕತ್ತದಿಂದ ನಾಲ್ಕು ಮೈಲಿ ದೂರದಲ್ಲಿ ಗಂಗಾನದಿಯ ಪೂರ್ವದಂಡೆಯಲ್ಲಿದೆ. ಇಲ್ಲಿ ಕಾಳಿಮಾತೆಯ ಹಾಗೂ ಶಿವ ಮತ್ತ ರಾಧಾಕಾಂತರ ದೇವಸ್ಥಾನಗಳಿವೆ. ದಕ್ಷಿಣಾಭಿಮುಖಳಾದ ಕಾಳಿ ಇಲ್ಲಿ ಭವತಾರಿಣಿಯೆಂದು ಹೆಸರಾಗಿದ್ದಾಳೆ. ಇಲ್ಲಿನ ದೇವಮಂದಿರವನ್ನು ಕಾಳಿಯ ಪರಮ ಭಕ್ತಳಾದ ರಾಣಿ ರಾಸಮಣಿ ಕಟ್ಟಿಸಿದಳು.  ಈ ಮಂದಿರ ಪೂರ್ಣವಾಗಲು ಎಂಟು ವರ್ಷಗಳು ಹಿಡಿದವು.	
	(ಎಸ್.ಡಬ್ಲ್ಯೂ.ಎ.)

ರಾಣಿ ರಾಸಮಣಿ ಹೀನಕುಲದ ಸ್ತ್ರೀ. ಕಲ್ಕತ್ತದ ಜಾನಬಾಜಾರಿನಲ್ಲಿ ಈಕೆಯ ವಾಸ. ಶ್ರೀಮಂತೆಯೂ ಭಕ್ತಳೂ ಆದ ಈಕೆಗೆ ಕಾಳಿಕಾದೇವಿ ತನಗೊಂದು ಆಲಯವನ್ನು ನಿರ್ಮಿಸುವಂತೆ ಆದೇಶವಿತ್ತಳಂತೆ. ಅದನ್ನು ನೆರವೇರಿಸಲು ಈಕೆ ದಕ್ಷಿಣೇಶ್ವರವನ್ನಾರಿಸಿದಳು. ಇಲ್ಲಿ ದೇವಪ್ರತಿಷ್ಠಾಪನಾ ಕಾರ್ಯ 1855 - 56 ರಲ್ಲಿ ನೆರವೇರಿತು.

ಇಲ್ಲಿ ಕಾಳಿಮಾತೆಯ ದೇವಸ್ಥಾನವೇ ಬಹು ದೊಡ್ಡದು. ಈ ಪ್ರದೇಶದ ಉತ್ತರ ಮತ್ತು ಪೂರ್ವದ ಸ್ವಲ್ಪ ಭಾಗಗಳಲ್ಲಿ ಹಣ್ಣಿನ ಹೂವಿನ ತೋಟಗಳಿವೆ. ದಕ್ಷಿಣಕ್ಕೆ ಭದ್ರವಾದ ಗೋಡೆ ಇದೆ. ಉತ್ತರ ದಿಕ್ಕಿನಲ್ಲಿ ಪಶ್ಚಿಮಕ್ಕೆ ಮುಖದ್ವಾರವಿರುವ ರಾಧಾಕಾಂತ ಮಂದಿರವಿದೆ. ದೇವಾಲಯದ ಮೊಗಸಾಲೆಯ ಮುಂದುಗಡೆ ಸ್ನಾನಘಟಕ್ಕೆ ಹೋಗುವ ದಾರಿಯ ಎರಡೂ ಪಕ್ಕಗಳಲ್ಲಿ ಆರಾರು ಸಣ್ಣ ಸಣ್ಣ ಶಿವಾಲಯಗಳಿವೆ. ದೇವಾಲಯದ ದಕ್ಷಿಣಕ್ಕೆ ಸಂಗೀತ ಭವನವಿದೆ. ಸುತ್ತಲೂ ಕೊಠಡಿಗಳಿದ್ದು ವಾಯುವ್ಯದಲ್ಲಿ ಶ್ರೀರಾಮಕೃಷ್ಣ, ಶಾರದಾಮಣಿದೇವಿಯರ ಕೊಠಡಿಗಳಿವೆ.

ಇಲ್ಲಿಯ ಬಸಾಲ್ಟ್ ಶಿಲಾನಿರ್ಮಿತ ಭವತಾರಿಣಿಯ ಮೂರ್ತಿ ಸುಂದರವಾಗಿದೆ. ವಸ್ತ್ರಾಲಂಕಾರ ಭೂಷಿತಳಾದ ಕಾಳಿ ಇಲ್ಲಿ ಬೆಳ್ಳಿಯ ಸಾವಿರದಳಕಮಲದ ಮೇಲಿರುವ ಶಿವನ ಎದೆಯನ್ನು ಮೆಟ್ಟಿ ನಿಂತಿದ್ದಾಳೆ. ಟೊಂಕದಲ್ಲಿ ಮಾನವ ತೋಳುಗಳ ನಡುಪಟ್ಟಿ, ಕಂಠದಲ್ಲಿ ತಲೆಬುರುಡೆಗಳ ಹಾರ, ಮೊಗದಲ್ಲಿ ತನ್ನ ಪವಿತ್ರ ಸಂಗಾತಿ ಶಿವನನ್ನು ಕಾಲ್ಬುಡದಲ್ಲಿ ಕಂಡುಂಟಾದ ಸ್ತ್ರೀಸಹಜ ಲಜ್ಜೆ ಇವೆ. ತ್ರಿನೇತ್ರಗಳಲ್ಲಿ ದುಷ್ಟಶಿಕ್ಷಾ, ಶಿಷ್ಟರಕ್ಷಾ ಭಾವ ಕಂಡುಬರುತ್ತದೆ.  ನಾಲ್ಕು ಕೈಗಳಿಂದಲಂಕೃತಳಾದ ಕಾಳಿಯ ಎಡದ ಕೆಳಗೈಯಲ್ಲಿ ಮನುಷ್ಯನ ಶಿರ, ಮೇಲ್ಗೈಯಲ್ಲಿ ರಕ್ತಸಿಕ್ತ ಬಾಗು ಕತ್ತಿ, ಬಲದ ಒಂದು ಕೈಯಲ್ಲಿ ವರವನ್ನೀಯುವ, ಮತ್ತೊಂದರಲ್ಲಿ ಭಯವನ್ನುಂಟು ಮಾಡುವ ಮುದ್ರೆ - ಇವನ್ನು ಕಾಣಬಹುದು. ಹೀಗೆ ಕ್ರೌರ್ಯ, ಕಾರುಣ್ಯ ಭಾವಗಳಿಂದ ಶೋಭಿತಳಾದ ಕಾಳಿ ಇಲ್ಲಿ ಭವತಾರಿಣಿ ಎನ್ನಿಸಿಕೊಂಡಿದ್ದಾಳೆ.

ಹತ್ತಿರದ ದೇವಸ್ಥಾನದಲ್ಲಿ ರಾಧಾಕಾಂತರ ಮೂರ್ತಿ ಸೌಂದರ್ಯ, ಪ್ರೇಮ ಭಾವಗಳ ಪ್ರತೀಕವಾಗಿ ಶೋಭಿಸುತ್ತದೆ. ಶಿವಮಂದಿರಗಳಲ್ಲಿ ಪರಮತ್ವದ ಸಂಕೇತವಾಗಿ ಪರಶಿವರೂಪಿತನಾಗಿದ್ದಾನೆ.

ರಾಣಿ ರಾಸಮಣಿ ಈ ಸೌಧಗಳನ್ನು ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಮೇಲೆ ಶ್ರೀರಾಮಕೃಷ್ಣ ಪರಮಹಂಸರು ದೇವಾಲಯಗಳ ಪೂಜಾಕಾರ್ಯವನ್ನು ವಹಿಸಿಕೊಂಡರು. ಇಲ್ಲಿ ಅವರು ವಾತ್ಸಲ್ಯ, ಮಧುರಭಾವಗಳ ಮೂಲಕ ದೈವ ಸಾಕ್ಷಾತ್ಕಾರವನ್ನು ಪಡೆದದ್ದಲ್ಲದೆ ಜಗತ್ತಿನ ಹಲವು ಧರ್ಮಗಳನ್ನನುಸರಿಸಿ ಅವುಗಳ ರೀತ್ಯಾ ದೈವಸಾಕ್ಷಾತ್ಕಾರ ಪಡೆದರು; ತನ್ನ ಪತ್ನಿ ಶಾರದಾಮಣಿದೇವಿಯಲ್ಲಿ ಜಗನ್ಮಾತೆ ಭವತಾರಿಣಿಯನ್ನು ದರ್ಶಿಸಿದರು. ಶ್ರೀರಾಮಕೃಷ್ಣರ ಸ್ಮøತಿಯನ್ನು ಜೀವಂತವಾಗಿಟ್ಟಿರುವ ಸ್ಥಳಗಳು ಇಲ್ಲಿ ಹಲವಾರು ಇವೆ. ಸ್ನಾನಘಟ್ಟ, ಅದ್ವೈತ, ಸಾಧಕರು ತೋತಾಪುರಿಯನ್ನು ಸಂಧಿಸಿದ ಸ್ಥಾನ. ಅದರ ಉತ್ತರಕ್ಕೆ ದೊಡ್ಡ ಆಲದಮರವುಳ್ಳ ಪಂಚವಟಿ, ಅವರು ಸಿದ್ಧಿಪಡೆದ ಸ್ಥಳ. ತೋಟದ ತೀರ ಉತ್ತರಕ್ಕಿರುವ ಬೇಲದ ಮರದಡಿಯಲ್ಲಿರುವ ಪರಾಮುಂಡಿ ಆಸನ ಮತ್ತೊಂದು ಸಾಧನಾ ಸ್ಥಳ. ಹೀಗೆಯೇ ಈ ಪ್ರದೇಶ ಶ್ರೀರಾಮಕೃಷ್ಣ ಶಾರದಾಮಣಿದೇವಿ ಸ್ವಾಮಿ ವಿವೇಕಾನಂದ ಇವರುಗಳ ಜೀವಿತಕ್ಕೆ ಸಂಬಂಧಿಸಿದ ಸಂಗತಿಗಳಿಂದ ತುಂಬಿದೆ.

ದಕ್ಷಿಣೇಶ್ವರದಲ್ಲಿಂದು ಯಾತ್ರಿಕರಿಗೆ ಸಕಲ ಸೌಲಭ್ಯಗಳೂ ದೊರಕುತ್ತವೆ. ಇದು ಒಮ್ಮೆ ರುದ್ರಭೂಮಿಯಾಗಿತ್ತು. ಆದರೆ ಇಂದು ಭವತಾರಿಣಿಯ ಆವಾಸ ಸ್ಥಾನವಾಗಿ ಪರಮಹಂಸರ ಸಿದ್ಧಕ್ಷೇತ್ರವಾಗಿ ಪ್ರಸಿದ್ಧವಾಗಿದೆ.				
(ಪಿ.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ